ಶ್ರೀಮತಿ ಎಂ. ಕೆ. ಜಯಮ್ಮ ಮತ್ತು ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ದತ್ತಿ ವತಿಯಿಂದ ಉದ್ಯಮ್ ಸಾರ್ವಜನಿಕ ದತ್ತಿ ಇವರ ಸಹಯೋಗದೊಡನೆ ಭಾನುವಾರ, 7ನೇ ಆಗಸ್ಟ್ 2016 ರಂದು 6ನೇ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರಿಗೆ ಈ ಸಂದರ್ಭದಲ್ಲಿ ಶೈಕ್ಷಣಿಕ ಶುಲ್ಕ, ಪುಸ್ತಕ, ಸಾರಿಗೆ ಇತ್ಯಾದಿಗಳಿಗೆ ಬೇಕಾದ ಧನ ಸಹಾಯ ನೀಡಲಾಯಿತು. ಬೆಂಗಳೂರು ನಗರದ ವಿವಿಧ ಕಾಲೇಜು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಓದುತ್ತಿರುವ 51 ವಿದ್ಯಾರ್ಥಿನಿಯರು, ಮತ್ತು ಆಜೀವ ಶಿಕ್ಷೆಗೊಳಗಾಗಿರುವ ಮಕ್ಕಳಲ್ಲಿ ಮೂರು ವಿದ್ಯಾರ್ಥಿನಿಯರನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು.
ಮೈಸೂರು ಜಿಲ್ಲೆಯ ಹೆಗ್ಗಡೆ ದೇವನ ಕೋಟೆ ತಾಲೂಕಿನ ಬುಡಕಟ್ಟು ಜನಾಂಗದ ಶಾಲೆಯ ಶಿಕ್ಷಕರಿಗೆಂದು ಶ್ರೀಮತಿ ಎಂ. ಕೆ. ಜಯಮ್ಮ ಮತ್ತು ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ದತ್ತಿ ಮತ್ತು ಶ್ರೀಮತಿ ಮತ್ತು ಶ್ರೀ ಕುಶ್ ದೇಸಾಯಿ ಇವರ ಕೊಡುಗೆಯಿಂದ ವಸತಿ ಕಟ್ಟಡಗಳ ನಿರ್ಮಾಣ ಕಾರ್ಯ ಕಳೆದ ಒಂದು ವರ್ಷದಿಂದ ನಡೆದಿತ್ತು. ಕಾರ್ಯಕ್ರಮದ ಸಂದರ್ಭದಲ್ಲಿ ಕಟ್ಟಡದ ಬೀಗದಕೀಲಿಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ವಾರ್ಷಿಕ ಕಾರ್ಯಕ್ರಮದಲ್ಲಿ ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾಗಿರುವ ಸ್ವಾಮಿ ವೀರೇಶಾನಂದ ಸರಸ್ವತಿಯವರು ಆಶೀರ್ವಚನ ನೀಡಿದರು. ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಾದ ಡಾ. ಎಂ. ಎನ್.ವೆಂಕಟಾಚಲಯ್ಯ ಮತ್ತು ವಿಪ್ರೋ ಟೆಕ್ನಾಲಾಜಿ ಸಂಸ್ಥೆಯಲ್ಲಿ ಜೀವ ವಿಜ್ಞಾನ & ಸ್ವಾಸ್ಥ್ಯ ಇವುಗಳ ತಂತ್ರಜ್ಞಾನ & ನಾವೀನ್ಯತೆ ಗಳ ಮುಖ್ಯಸ್ಥೆ ಶ್ರೀಮತಿ ಸುಜಾತ ವಿಶೇಶ್ವರ ಇವರುಗಳು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ವರ್ಷದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಹೆಸರಾಂತ ಸಂಗೀತ ಸಂಯೋಜಕ ಮತ್ತು ನಿರ್ದೇಶಕರಾದ ಶ್ರೀ. ರಾಜನ್, ಮನ್ನಣೆ ಪಡೆದ ಗಣಿತ ಪ್ರಾಧ್ಯಾಪಕರಾದ ಪ್ರೊ. ಎಸ್. ಸುಂದರ್ ರಾಜ್, ಉಜಿರೆಯ ಶ್ರೀ. ಧರ್ಮಸ್ಥಳ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳಾಗಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ದಂಪತಿಗಳಾದ ಎನ್. ಬಿ. ಭಟ್, ಮತ್ತು ಕಮಲ ಭಟ್ ಮತ್ತು ಸಾರ್ವಜನಿಕರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿರುವ ಸಹಾಯಕ ಇನ್ಸ್ಪೆಕ್ಟರ್ ಆಗಿರುವ ಶ್ರೀ. ಕೆ. ಸತ್ಯನಾರಾಯಣ ಅವರುಗಳು ಸನ್ಮಾನ ಪಡೆದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಪೋಲೀಸ್ ಮಹಾ ನಿರ್ದೇಶಕರಾದ ಡಾ. ಎಸ್. ಟಿ. ರಮೇಶ್ ಮತ್ತು ಯುವಿಸಿಇ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ಎಂ.ಕೆ.ಎನ್.ಎಲ್. ಶಾಸ್ತ್ರಿ – ಇವರುಗಳ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.