‘ನೈತಿಕತೆ ಕಲಿಸುವ ಶಿಕ್ಷಣ ಅಗತ್ಯ'
(Reported
in Prajavaani on 28th April 2014)
ಪ್ರಸ್ತುತ
ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ನೈತಿಕತೆ ಕಲಿಸುತ್ತಿಲ್ಲ.
ಶಾಲೆಗಳು ಯೋಗ್ಯತಾಪತ್ರ ನೀಡಲು ಸೀಮಿತವಾಗುತ್ತಿವೆಯೇ ಹೊರತು ಮಕ್ಕಳಿಗೆ ಯೋಗ್ಯತೆ ನೀಡುತ್ತಿಲ್ಲ’ ಎಂದು ತುಮಕೂರಿನ ರಾಮಕೃಷ್ಣ ಮಠದ ವೀರೇಶಾನಂದ
ಸರಸ್ವತಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಬಿಎಸ್‌ಆರ್
ಶಾಸ್ತ್ರಿ ಫ್ಯಾಮಿಲಿ ಟ್ರಸ್ಟ್ ನಗರದ ಮಿಥಿಕ್ ಸೊಸೈಟಿಯಲ್ಲಿ ಭಾನುವಾರ ಆಯೋಜಿಸಿದ್ದ
ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನೈತಿಕ
ಸಾಮರ್ಥ್ಯ ಬೆಳೆಸದ ಶಿಕ್ಷಣದಿಂದ ಪ್ರಯೋಜನವಿಲ್ಲ. ಮಾತೃ, ಮಾತೃಭೂಮಿ ಹಾಗೂ ಮಾತೃಭಾಷೆಯನ್ನು ಮಕ್ಕಳು ಮರೆಯಬಾರದು. ಮಕ್ಕಳಿಗೆ ಮೌಲ್ಯಗಳ
ಪಾಠ ಸಿಗಬೇಕು. ಮಕ್ಕಳು ನಿಜವಾದ ಜ್ಞಾನ ಪಡೆಯುವಂಥ ಶಿಕ್ಷಣ
ನೀಡಬೇಕು. ಆಳುವ ಯೋಗ್ಯತೆ ಇಲ್ಲದವರು ಸದ್ಯ
ರಾಜಕೀಯ ಕ್ಷೇತ್ರದಲ್ಲಿದ್ದಾರೆ’
ಎಂದರು.
ಸುಪ್ರೀಂಕೋರ್ಟ್‌ನ
ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ
ಮಾತನಾಡಿ, ‘ನಮ್ಮ ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆ ಮಕ್ಕಳಿಗೆ
ತಿಳಿವಳಿಕೆ ನೀಡಬೇಕು. ಮೌಲ್ಯವಿಲ್ಲದ ಪಾಂಡಿತ್ಯದಿಂದ ಪ್ರಯೋಜನವಿಲ್ಲ’ ಎಂದು ನುಡಿದರು.
ನಿವೃತ್ತ ಡಿಜಿಪಿ ಡಾ.ಎಸ್.ಟಿ.ರಮೇಶ್
ಮಾತನಾಡಿ, ‘ನಮ್ಮ ದೇಶಕ್ಕೆ ಕಾನೂನನ್ನು ಬೇರೆ
ದೇಶದಿಂದ ಪಡೆದಂತೆ ಶಿಕ್ಷಣ ಪದ್ಧತಿಯನ್ನೂ ಹೊರದೇಶಗಳಿಂದ ಪಡೆದುಕೊಳ್ಳಲಾಗಿದೆ. ಇದರಿಂದ ನಮ್ಮ ಪಾರಂಪರಿಕ ಜ್ಞಾನ ಮಕ್ಕಳಿಗೆ
ಸಿಗುತ್ತಿಲ್ಲ. ಹೀಗಾಗಿ ಮೌಲ್ಯಗಳು ಸಮಾಜದಿಂದ ಮರೆಯಾಗುತ್ತಿವೆ’ ಎಂದರು.
ಕಾರ್ಯಕ್ರಮದಲ್ಲಿ
ಅದಮ್ಯ ಚೇತನ ಟ್ರಸ್ಟ್‌ನ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್, ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ
ವಿಭಾಗದ ಮುಖ್ಯಸ್ಥ ಡಾ.ವೈ.ನರಹರಿ, ರೈಲ್ವೆ ಇಲಾಖೆಯ
ನಿವೃತ್ತ ಪ್ರಧಾನ ವ್ಯವಸ್ಥಾಪಕ ಬಿ.ಎನ್.ರಾಜಶೇಖರ್ ಮತ್ತು ಜ್ಞಾನ ಸಂಜೀವಿನಿ ಆರೋಗ್ಯ ಕೇಂದ್ರದ
ನಿರ್ದೇಶಕ ಡಾ.ಎಸ್.ಶ್ರೀಕಂಠ ಅವರನ್ನು ಸನ್ಮಾನಿಸಲಾಯಿತು.
‘ಇಂದಿನ ಯುವ ಪೀಳಿಗೆಯವರು ಹೆಚ್ಚು ಹೆಚ್ಚು ಅಂಕ
ಗಳಿಸುತ್ತಾರೆ. ವೈಯಕ್ತಿಕ ಸಾಧನೆಯಲ್ಲಿ
ಮುಂದಿರುವ ಯುವ ಜನತೆ ಸಾಂಘಿಕ ಸಾಧನೆಯ ಕಡೆಗೂ ಗಮನ ಹರಿಸಬೇಕು. ನನಗೆ ಸಿಕ್ಕ ಸನ್ಮಾನ ನಮ್ಮ
ಸಂಸ್ಥೆಯ ಎಲ್ಲ ಸಿಬ್ಬಂದಿಗೆ ನೀಡಿದ ಗೌರವ’ ಎಂದು
ತೇಜಸ್ವಿನಿ ಅನಂತಕುಮಾರ್ ಹೇಳಿದರು.
ವೈ.ನರಹರಿ
ಮಾತನಾಡಿ, ‘ವಿದ್ಯಾರ್ಥಿಗಳು
ಪ್ರಾಮಾಣಿಕತೆ, ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ತಮ್ಮ
ಸ್ಫೂರ್ತಿಗಾಗಿ ಹೊರದೇಶಗಳ ಕಡೆಗೆ ನೋಡುವ ಅಗತ್ಯವಿಲ್ಲ. ನಚಿಕೇತ, ಭೃಗು, ಸ್ವಾಮಿ ವಿವೇಕಾನಂದರನ್ನು ವಿದ್ಯಾರ್ಥಿಗಳು ಆದರ್ಶವಾಗಿ ಸ್ವೀಕರಿಸಬೇಕು’ ಎಂದರು.
ಕಾರ್ಯಕ್ರಮದಲ್ಲಿ
ವಿವಿಧ ಕೋರ್ಸ್ಗಳ 82
ವಿದ್ಯಾರ್ಥಿಗಳಿಗೆ ಒಟ್ಟು ₨
7 ಲಕ್ಷ ಮೌಲ್ಯದ
ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಸ್ಥೆಯ ಟ್ರಸ್ಟಿಗಳಾದ ಬಿ.ಆರ್.ನಾಗರಾಜ್, ಬಿ.ಆರ್.ರವಿ ಮತ್ತಿತರರು
ಉಪಸ್ಥಿತರಿದ್ದರು.
No comments:
Post a Comment